ಚಾಲಕ ತಿಮಿ -
	ಸಿಟೇಷಿಯ ಗಣ, ಒಡಾಂಟೊಸೀಟೈ ಉಪಗಣಗಳ ಡೆಲ್ಫಿನಿಡೀ ಕುಟುಂಬಕ್ಕೆ ಸೇರಿದ ಒಂದು ತಿಮಿಂಗಿಲ (ಪೈಲಟ್ ಹ್ವೇಲ್). ಡಾಲ್ಫಿನುಗಳಿಗೆ ಹತ್ತಿರ ಸಂಬಂಧಿ. ಕಪ್ಪು ಮೀನು (ಬ್ಲ್ಯಾಕ್ ಫಿಷ್), ಕಾಯಿಂಗ್ ತಿಮಿ ಮುಂತಾದುವು ಇದರ ಪರ್ಯಾಯನಾಮಗಳು. ಶಾಸ್ತ್ರೀಯ ಹೆಸರು ಗ್ಲೋಬಿಸೆಫಲ. ಮೆಲೀನ, ಮ್ಯಾಕ್ರೊರಿಂಕ ಮತ್ತು ಸ್ಕ್ಯಾಮೋನೈ ಎಂಬ ಮೂರು ಪ್ರಭೇದಗಳಿವೆ. ಚಾಲಕ ತಿಮಿ ಸಂಘಜೀವಿ; ನೂರಾರು ಪ್ರಾಣಿಗಳನ್ನೊಳಗೊಂಡ ದೊಡ್ಡ ಗುಂಪುಗಳಲ್ಲಿ ಜೀವಿಸುತ್ತದೆ. ಗುಂಪಿನ ನಾಯಕನನ್ನು ಎಂಥ ಪರಿಸ್ಥಿತಿಯಲ್ಲೂ ಕುರುಡಾಗಿ ಹಿಂಬಾಲಿಸುವ ಸ್ವಾಭಾವಿಕ ಪ್ರವೃತ್ತಿಯನ್ನು ಇದು ಪ್ರದರ್ಶಿಸುತ್ತದೆ. ಬಹುಶಃ ಈ ಗುಣದಿಂದಾಗಿಯೇ ಇದಕ್ಕೆ ಚಾಲಕ ತಿಮಿ ಎಂಬ ಹೆಸರು ಬಂದಿರಬೇಕು. ಇದು ಸುಮಾರು 6-9m. ಉದ್ದಕ್ಕೆ ಬೆಳೆಯುವ ಸಾಗರವಾಸಿ ಸಸ್ತನಿ. ತೂಕ ಸುಮಾರು 700ಞg. ಇದರ ತಲೆ ದೊಡ್ಡದಾಗಿ ಉಬ್ಬಿಕೊಂಡಿರುವುದರಿಂದ ಹಣೆ ಮೇಲ್ದವಡೆಯ ಮೇಲ್ಭಾಗದಲ್ಲಿ ಮುಂದಕ್ಕೆ ಚಾಚಿದೆ. ಇದರಿಂದಾಗಿ ತಲೆ ಗೋಳಾಕಾರದ್ದಾಗಿದೆ. ಇದರಿಂದಲೇ ಇದಕ್ಕೆ ಗ್ಲೋಬಿಸೆಫಲ ಎಂಬ ಶಾಸ್ತ್ರೀಯ ಹೆಸರನ್ನು ಕೊಡಲಾಗಿದೆ. ಇದರ ದೇಹದ ಬಣ್ಣ ಅಚ್ಚಕಪ್ಪು. ಗದ್ದದ ಬಳಿ ಮಾತ್ರ ಬಿಳಿಬಣ್ಣದ ಮಚ್ಚೆಯೊಂದಿದೆ. ಬೆನ್ನ ಮೇಲೆ ಒಂದು ಅಡಿ ಎತ್ತರದ ಈಜುರೆಕ್ಕೆಯೂ ತಲೆ ಮತ್ತು ದೇಹ ಸೇರುವೆಡೆಯಲ್ಲಿ ಅಕ್ಕಪಕ್ಕಗಳಲ್ಲಿ ಒಂದೊಂದು ಈಜು ಅಂಗವೂ ಇವೆ. ಪ್ರತಿಯೊಂದು ದವಡೆಯಲ್ಲೂ 14-22 ಹಲ್ಲುಗಳಿವೆ.

ಈಜುವಾಗ ಒಂದು ಗುಂಪಿನ ಎಲ್ಲ ತಿಮಿಗಳೂ ಏಕಕಾಲದಲ್ಲಿ ನೀರಿನಲ್ಲಿ ಮುಳುಗುತ್ತ ಏಳುತ್ತ ಬಹಳ ವೇಗವಾಗಿ ಚಲಿಸುತ್ತವೆ. ಚಾಲಕತಿಮಿಯಲ್ಲಿ ವಲಸೆ ಹೋಗುವ ಪ್ರವೃತ್ತಿಯೂ ಉಂಟು. ಋತುಗಳಿಗೆ ಅನುಗುಣವಾಗಿ ಶೀತ ಸಮುದ್ರ ಹಾಗೂ ಉಷ್ಣವಲಯದ ಸಾಗರಗಳ ನಡುವೆ ಚಲಿಸುತ್ತದೆ. ಹಲವಾರು ಬಗೆಯ ಮೀನುಗಳು, ಸ್ಕ್ವಿಡ್ಡುಗಳು ಮತ್ತು ಕಟಲ್‍ಮೀನುಗಳು ಚಾಲಕ ತಿಮಿಯ ಪ್ರಧಾನ ಆಹಾರ. ಇವುಗಳ ಸಂತಾನೋತ್ಪತ್ತಿಯ ಕಾಲ ಚಳಿಗಾಲ. ಒಂದು ಸಲಕ್ಕೆ ಒಂದೇ ಒಂದು ಮರಿ ಹುಟ್ಟುತ್ತದೆ. ಗರ್ಭಧಾರಣಾ ಅವಧಿ ಸುಮಾರು ಒಂದು ವರ್ಷ. ಆಗತಾನೇ ಹುಟ್ಟಿದ ಮರಿಗಳು 2-3 m. ಉದ್ದವಿರುವುದುಂಟು. ಸುಮಾರು 1 1/2 ವರ್ಷ ಕಾಲ ತಾಯೊಡನೇ ಇದ್ದು ಅನಂತರ ಸ್ವತಂತ್ರ ಜೀವನ ಆರಂಭಿಸುತ್ತವೆ. ಲೈಂಗಿಕ ಪ್ರಬುದ್ಧಾವಸ್ಥೆ ಹೆಣ್ಣಿಗೆ 6 ವರ್ಷ ವಯಸ್ಸಾದಾಗಲೂ ಗಂಡಿಗೆ 13 ವರ್ಷ ವಯಸ್ಸಾದಾಗಲೂ ಬರುತ್ತದೆ. ಚಾಲಕ ತಿಮಿಗಳ ಆಯಸ್ಸು ಸುಮಾರು 50 ವರ್ಷಗಳು. ನ್ಯೂಫೌಂಡ್ಲೆಂಡ್, ಸ್ಕಾಟ್ಲೆಂಡ್ ಮುಂತಾದೆಡೆ ಎಣ್ಣೆಗೋಸ್ಕರ ಚಾಲಕ ತಿಮಿಗಳನ್ನು ಬೇಟೆಯಾಡುವುದಿದೆ. ನ್ಯೂಫೌಂಡ್ಲೆಂಡಿನಲ್ಲಿ ವರ್ಷಕ್ಕೆ 3000-4000 ತಿಮಿಗಳನ್ನು ಕೊಲ್ಲುವುದುಂಟು. ಒಂದು ತಿಮಿಯಿಂದ ಸುಮಾರು 200 ಲೀಟರ್ ಎಣ್ಣೆ ದೊರೆಯುತ್ತದೆ.
(ಎ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ